Karnataka Chitradurga Bus Accident Kills 9, ಚಿತ್ರದುರ್ಗ ಬಸ್ ದುರಂತ: ಪ್ರಧಾನಿ ಮೋದಿ ಸಂತಾಪ, ಮೃತರ ಕುಟುಂಬಕ್ಕೆ ₹2 ಲಕ್ಷ ಪರಿಹಾರ ಘೋಷಣೆ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಕ್ರಾಸ್ ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 9 ಮಂದಿ ಸಜೀವ ದಹನವಾಗಿ ಮೃತಪಟ್ಟಿದ್ದಾರೆ. ಈ ದುರ್ಘಟನೆಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿ (PMNRF) ಯಿಂದ ತಲಾ ₹2 ಲಕ್ಷ ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಗಾಯಾಳುಗಳಿಗೆ ₹50,000 ಆರ್ಥಿಕ ನೆರವು ನೀಡಲಾಗುವುದು ಎಂದೂ ತಿಳಿಸಿದ್ದಾರೆ.
ನವದೆಹಲಿ, ಡಿಸೆಂಬರ್ 25:
ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಬಸ್ ಅಪಘಾತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಆಘಾತ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪ್ರಧಾನಮಂತ್ರಿ ಕಾರ್ಯಾಲಯವು ಎಕ್ಸ್ (ಟ್ವಿಟರ್) ಮೂಲಕ ಮಾಹಿತಿ ಹಂಚಿಕೊಂಡಿದೆ.
“ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಜೀವಹಾನಿಯಾದ ಸುದ್ದಿ ತೀವ್ರ ದುಃಖ ತಂದಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ” ಎಂದು ಪ್ರಧಾನಿ ಸಂದೇಶದಲ್ಲಿ ತಿಳಿಸಿದ್ದಾರೆ.
ಅದೇ ವೇಳೆ, ಮೃತರ ಸಂಬಂಧಿಕರಿಗೆ ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ ₹2 ಲಕ್ಷ ಹಾಗೂ ಗಾಯಾಳುಗಳಿಗೆ ₹50,000 ಪರಿಹಾರ ನೀಡಲಾಗುವುದು ಎಂದು ಪ್ರಧಾನಿ ಘೋಷಿಸಿದ್ದಾರೆ.
ಅಪಘಾತದ ವಿವರ
ಗೊರ್ಲತ್ತು ಕ್ರಾಸ್ ಬಳಿ ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಗೆ ಎದುರು ದಿಕ್ಕಿನಿಂದ ಬಂದ ಕಂಟೇನರ್ ಲಾರಿ ಡಿವೈಡರ್ ದಾಟಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಬಸ್ಗೆ ಬೆಂಕಿ ಹೊತ್ತಿಕೊಂಡು 9 ಮಂದಿ ಸಜೀವ ದಹನವಾಗಿದ್ದಾರೆ.
32 ಆಸನ ಸಾಮರ್ಥ್ಯದ ಬಸ್ನಲ್ಲಿ 29 ಪ್ರಯಾಣಿಕರು ಇದ್ದರು. ಬಸ್ ಚಾಲಕ ಮತ್ತು ಕ್ಲೀನರ್ ಅಪಘಾತದಿಂದ ಪಾರಾಗಿದ್ದು, ಚಾಲಕನ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಚಿತ್ರದುರ್ಗ ಮತ್ತು ತುಮಕೂರು ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಲಾರಿ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯ ಸಂತಾಪ
ಈ ದುರಂತದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
“ಚಿತ್ರದುರ್ಗ ಬಳಿ ಸಂಭವಿಸಿದ ಬಸ್-ಲಾರಿ ಅಪಘಾತದಲ್ಲಿ ಪ್ರಯಾಣಿಕರು ಸಜೀವ ದಹನವಾಗಿರುವ ಸುದ್ದಿ ಎದೆ ನಡುಗಿಸಿದೆ. ಕ್ರಿಸ್ಮಸ್ ರಜೆಯಲ್ಲಿ ಊರಿಗೆ ತೆರಳುತ್ತಿದ್ದವರ ಪ್ರಯಾಣ ಈ ರೀತಿ ದುರಂತದಲ್ಲಿ ಅಂತ್ಯಗೊಂಡಿರುವುದು ಅತ್ಯಂತ ವಿಷಾದನೀಯ. ಅಪಘಾತದ ಕುರಿತು ಸೂಕ್ತ ತನಿಖೆ ನಡೆಸಲಾಗುವುದು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಅವರು ಎಕ್ಸ್ನಲ್ಲಿ ತಿಳಿಸಿದ್ದಾರೆ.
ಚಿತ್ರದುರ್ಗ ಬಳಿ ಸಂಭವಿಸಿದ ಲಾರಿ ಮತ್ತು ಬಸ್ ನಡುವಿನ ಅಪಘಾತದಲ್ಲಿ ಹಲವು ಪ್ರಯಾಣಿಕರು ಸಜೀವ ದಹನವಾದ ಘೋರ ದುರಂತದ ಸುದ್ದಿ ಕೇಳಿ ಎದೆ ನಡುಗಿತು. ಕ್ರಿಸ್ಮಸ್ ರಜೆಯಲ್ಲಿ ಊರಿಗೆ ತೆರಳುತ್ತಿದ್ದವರ ಪ್ರಯಾಣ ಈ ರೀತಿ ದುರಂತದಲ್ಲಿ ಕೊನೆಗೊಂಡಿರುವುದು ವಿಷಾದನೀಯ.
ಅಪಘಾತದ ಬಗ್ಗೆ ಸೂಕ್ತ ತನಿಖೆ ನಡೆಸಿ, ಕಾರಣವನ್ನು ಪತ್ತೆಹಚ್ಚಲಾಗುವುದು.
ಮೃತರ… pic.twitter.com/Ol4dR9ercB— Siddaramaiah (@siddaramaiah) December 25, 2025
ಹೆಚ್ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಸಂತಾಪ
ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ದುರಂತಕ್ಕೆ ಆಘಾತ ವ್ಯಕ್ತಪಡಿಸಿದ್ದು, ಮೃತರಿಗೆ ಚಿರಶಾಂತಿ ಸಿಗಲಿ ಹಾಗೂ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ರಾಜ್ಯ ಸರ್ಕಾರ ಗಾಯಾಳುಗಳ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಲಿ ಎಂದು ಆಗ್ರಹಿಸಿದ್ದಾರೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ಸಂತಾಪ ಸೂಚಿಸಿ, “ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ. ಇಂತಹ ದುರಂತಗಳು ಮರುಕಳಿಸದಿರಲಿ” ಎಂದು ಹೇಳಿದ್ದಾರೆ.

[…] ಸ್ಫೋಟದಲ್ಲಿ ಸಲೀಂ ಸ್ಥಳದಲ್ಲೇ ಮೃತಪಟ್ಟಿದ್ದಾನೆ. […]