New Year CelebrationsNew Year Celebrations

New Year Celebrations 2026: Bengaluru Police Step Up Security Measures, ಹೊಸ ವರ್ಷಕ್ಕೆ ಕೌಂಟ್ಡೌನ್: ಖಾಕಿ ಅಲರ್ಟ್; ಎಣ್ಣೆ ಏಟಲ್ಲಿ ಎಲ್ಲಾದ್ರೂ ಮಲಗಿದ್ರೆ ಪೊಲೀಸರೇ ಮನೆಗೆ ತಲುಪಿಸ್ತಾರೆ!

ಹೊಸ ವರ್ಷ 2026ರ ಸಂಭ್ರಮಾಚರಣೆಗೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದು, ನಗರದೆಲ್ಲೆಡೆ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳು, ಬ್ಯಾರಿಕೇಡ್‌ಗಳು ಅಳವಡಿಸಲಾಗಿದೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು, ಆನ್‌ಲೈನ್ ಡೆಲಿವರಿ ಹಾಗೂ ಪ್ರವಾಸಿ ತಾಣಗಳ ಮೇಲೂ ಹಲವು ನಿರ್ಬಂಧಗಳು ಜಾರಿಯಲ್ಲಿವೆ.

ಬೆಂಗಳೂರು, ಡಿಸೆಂಬರ್ 30:
2025ಕ್ಕೆ ವಿದಾಯ ಹೇಳಿ, ಹೊಸ ವರ್ಷ 2026ನ್ನು ಸ್ವಾಗತಿಸಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಜನರು ನ್ಯೂ ಇಯರ್ ಸಂಭ್ರಮಕ್ಕೆ ಸಜ್ಜಾಗಿದ್ದಾರೆ. ಇದೇ ವೇಳೆ, ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಮದ್ಯಪಾನ ಮಾಡಿ ಎಲ್ಲಾದರೂ ಮಲಗಿದರೆ, ಪೊಲೀಸರೇ ಸುರಕ್ಷಿತವಾಗಿ ಮನೆಗೆ ತಲುಪಿಸುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಎಲ್ಲೆಡೆ ಪೊಲೀಸ್ ಹದ್ದಿನ ಕಣ್ಣು

ಹೊಸ ವರ್ಷಾಚರಣೆಯ ಕೌಂಟ್ಡೌನ್ ಆರಂಭವಾಗಿದ್ದು, ನಾಳೆ ಸಂಜೆಗಳಿಂದಲೇ ಸಂಭ್ರಮದ ವಾತಾವರಣ ಮನೆ ಮಾಡಲಿದೆ. ಬೆಂಗಳೂರಿನ ಎಂ.ಜಿ.ರೋಡ್, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ ಸೇರಿದಂತೆ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಪೊಲೀಸ್ ನಿಗಾವನ್ನು ಹೆಚ್ಚಿಸಲಾಗಿದೆ.
ಬ್ರಿಗೇಡ್ ರಸ್ತೆಯೊಂದರಲ್ಲೇ 360ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ನಗರದೆಲ್ಲೆಡೆ ಸುಮಾರು 6 ಸಾವಿರ ಹೆಚ್ಚುವರಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿವೆ. ಹಲವೆಡೆ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ.

ಎಲ್ಲಾದ್ರೂ ಮಲಗಿದ್ರೆ ಮನೆಗೆ ಬಿಡ್ತಾರೆ: ಡಿ.ಕೆ.ಶಿವಕುಮಾರ್

ಈ ಕುರಿತು ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯಿಸಿ, ರಾಜ್ಯಾದ್ಯಂತ ಶಾಂತಿ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಸಾರ್ವಜನಿಕರು ಸುರಕ್ಷಿತವಾಗಿರಲಿ ಎಂಬ ಉದ್ದೇಶದಿಂದ, ಮದ್ಯಪಾನ ಮಾಡಿ ಎಲ್ಲಾದರೂ ಮಲಗಿದವರನ್ನು ಪೊಲೀಸರು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ವ್ಯಾಪಾರ, ಆನ್‌ಲೈನ್ ಡೆಲಿವರಿ ಮೇಲೆ ಪರಿಣಾಮ

ಹೊಸ ವರ್ಷಾಚರಣೆಗೆ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಸಜ್ಜಾಗಿವೆ. ಡಿಸೆಂಬರ್ 31 ಹಾಗೂ ಜನವರಿ 1ರಂದು ಬೆಂಗಳೂರಿನಲ್ಲಿ ಉತ್ತಮ ವ್ಯಾಪಾರ ವಹಿವಾಟು ನಿರೀಕ್ಷೆಯಿದೆ. ಆದರೆ ಎಂ.ಜಿ.ರೋಡ್ ಮತ್ತು ರೆಸಿಡೆನ್ಸಿ ರಸ್ತೆ ಸುತ್ತಮುತ್ತ ವಾಹನ ಸಂಚಾರ ಹಾಗೂ ಪಾರ್ಕಿಂಗ್ ನಿಷೇಧದಿಂದ ವ್ಯಾಪಾರ ಮಂದಗತಿಯ ಭೀತಿ ಎದುರಾಗಿದೆ.
ಆನ್‌ಲೈನ್ ಫುಡ್ ಡೆಲಿವರಿ ಕ್ಷೇತ್ರದಲ್ಲಿ ಭರ್ಜರಿ ವ್ಯವಹಾರ ನಿರೀಕ್ಷೆಯಿದ್ದರೂ, ಹೆಚ್ಚಿದ ಆರ್ಡರ್ ಒತ್ತಡದಿಂದ ಡೆಲಿವರಿ ಸಿಬ್ಬಂದಿ ಸಂಕಷ್ಟ ಅನುಭವಿಸುವ ಸಾಧ್ಯತೆ ಇದೆ. ಕೋರಮಂಗಲದ ಪಬ್ ಮತ್ತು ಬಾರ್‌ಗಳ ಭದ್ರತೆ ಕುರಿತಾಗಿ ರಿಯಾಲಿಟಿ ಚೆಕ್ ಕೂಡ ನಡೆಯುತ್ತಿದೆ.

ರಾಜ್ಯದಾದ್ಯಂತ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ಮೂಲೆಮೂಲೆಯಲ್ಲೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ನಿಗಾ ವಹಿಸಿದೆ. ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಡ್ರಗ್ಸ್ ಪಾರ್ಟಿ ಆಯೋಜನೆ ಶಂಕೆ ಹಿನ್ನೆಲೆಯಲ್ಲಿ ಐವರು ಬಂಧಿತರಾಗಿದ್ದಾರೆ. ಅಲ್ಲದೆ, ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಕಂದಗಿರಿ ಹಾಗೂ ಕೈವಾರ ಬೆಟ್ಟಗಳಿಗೆ ಚಾರಣ ನಿಷೇಧವನ್ನು ಅರಣ್ಯ ಇಲಾಖೆ ವಿಧಿಸಿದೆ.

2 thoughts on “New Year Celebrations 2026: Bengaluru Police Step Up Security Measures”

Leave a Reply

Your email address will not be published. Required fields are marked *