Pregnant Woman Killed Over Dowry in Rajasthan’s Dholpur, In-Laws Secretly Perform Last Rites, ವರದಕ್ಷಿಣೆಗಾಗಿ ನಾಲ್ಕು ತಿಂಗಳ ಗರ್ಭಿಣಿ ಕೊಲೆ: ಅತ್ತೆ-ಮಾವರಿಂದ ರಹಸ್ಯ ಅಂತ್ಯಸಂಸ್ಕಾರ
ರಾಜಸ್ಥಾನದ ಧೋಲ್ಪುರದಲ್ಲಿ ವರದಕ್ಷಿಣೆ ಪಿಡುಗಿನ ಕ್ರೂರ ಮುಖ ಬಹಿರಂಗವಾಗಿದೆ. ಹೆಚ್ಚುವರಿ ವರದಕ್ಷಿಣೆ ತಂದಿಲ್ಲವೆಂಬ ಕಾರಣಕ್ಕೆ ನಾಲ್ಕು ತಿಂಗಳ ಗರ್ಭಿಣಿಯನ್ನು ಅತ್ತೆ-ಮಾವಂದಿರು ಕೊಲೆ ಮಾಡಿ, ಕುಟುಂಬಕ್ಕೆ ತಿಳಿಸದೇ ರಹಸ್ಯವಾಗಿ ಅಂತ್ಯಸಂಸ್ಕಾರ ನಡೆಸಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಜೈಪುರ, ಜನವರಿ 05: ದೇಶದಲ್ಲಿ ಶಿಕ್ಷಣ ಮತ್ತು ಅಭಿವೃದ್ಧಿ ಹೆಚ್ಚಾದರೂ, ವರದಕ್ಷಿಣೆ (Dowry) ಎಂಬ ಸಾಮಾಜಿಕ ಪಿಡುಗು ಇನ್ನೂ ಜೀವಂತವಾಗಿರುವುದು ಈ ಘಟನೆ ಸ್ಪಷ್ಟಪಡಿಸುತ್ತದೆ. ಧೋಲ್ಪುರ ಜಿಲ್ಲೆಯ ಇಂಚಾಪುರ ಗ್ರಾಮದಲ್ಲಿ ನಾಲ್ಕು ತಿಂಗಳ ಗರ್ಭಿಣಿಯಾದ 24 ವರ್ಷದ ಗುಡಿಯಾಳನ್ನು ವರದಕ್ಷಿಣೆಗಾಗಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಾದ ಅತ್ತೆ-ಮಾವಂದಿರು ಮತ್ತು ಕುಟುಂಬದವರು, ಆಕೆಯ ಪೋಷಕರಿಗೆ ಯಾವುದೇ ಮಾಹಿತಿ ನೀಡದೆ ಶವವನ್ನು ಸಗಣಿಯಿಂದ ಮಾಡಿದ ಚಿತೆಯ ಮೇಲೆ ಇಟ್ಟು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ನಂತರ ಗ್ರಾಮದಿಂದ ಪರಾರಿಯಾಗಿದ್ದಾರೆ. ಗುಡಿಯಾಳ ಅಕ್ಕ ಮಾಹಿತಿ ನೀಡಿದ ಬಳಿಕ ಈ ಭೀಕರ ಘಟನೆ ಬಹಿರಂಗವಾಗಿದೆ.
ಮಹಿಳೆಯ ಕುಟುಂಬಸ್ಥರು ಗ್ರಾಮಕ್ಕೆ ಧಾವಿಸಿದಾಗ, ಚಿತೆ ಇನ್ನೂ ಉರಿಯುತ್ತಿರುವುದನ್ನು ಕಂಡು ಆಘಾತಕ್ಕೊಳಗಾದರು. ತಕ್ಷಣವೇ ನೀರು ಸುರಿದು ಬೆಂಕಿಯನ್ನು ನಂದಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆಯ ಮಾಹಿತಿ ಪಡೆದ ಹಿರಿಯ ಪೊಲೀಸ್ ಅಧಿಕಾರಿಗಳು ವಿಧಿವಿಜ್ಞಾನ ಪ್ರಯೋಗಾಲಯ (FSL) ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಚಿತೆಯಿಂದ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ತಂಡ ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿದ್ದು, ಡಿಎನ್‌ಎ ಪರೀಕ್ಷೆಗೆ ಮಾದರಿಗಳನ್ನು ಕೂಡ ಸಂಗ್ರಹಿಸಲಾಗಿದೆ.
ಪೊಲೀಸರು ಮನೆಯೊಳಗೆ ರಕ್ತದ ಕಲೆಗಳು ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಕೊಡಲಿ, ಸನಿಕೆ, ಕೋಲು ಸೇರಿದಂತೆ ಹಲವು ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು, ಘಟನೆ ನಡೆದ ರಾತ್ರಿ ನಂತರ ಸಂತ್ರಸ್ತೆಯ ಪತಿ ಪಂಕಜ್ ಠಾಕೂರ್ ಅವರನ್ನು ಬಂಧಿಸಿದ್ದಾರೆ. ಅತ್ತೆ-ಮಾವ ಹಾಗೂ ಇತರ ಕುಟುಂಬ ಸದಸ್ಯರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ನಿವಾಸಿಯಾದ ಗುಡಿಯಾಳ ತಂದೆ ದೇವೇಂದ್ರ ಸಿಂಗ್ ಪರ್ಮಾರ್ ತಮ್ಮ ದೂರಿನಲ್ಲಿ, ಮೇ 28, 2025ರಂದು ತಮ್ಮ ಮಗಳನ್ನು ಪಂಕಜ್ ಠಾಕೂರ್ ಅವರೊಂದಿಗೆ ವಿವಾಹ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. ಮದುವೆಯ ವೇಳೆ 15 ಲಕ್ಷ ರೂ. ನಗದು, ಬೈಕ್, ಗೃಹೋಪಯೋಗಿ ವಸ್ತುಗಳು ಹಾಗೂ ಆಭರಣಗಳನ್ನು ವರದಕ್ಷಿಣೆಯಾಗಿ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇದರ ಹೊರತಾಗಿಯೂ, ಅತ್ತೆ-ಮಾವಂದಿರು ಕಾರು, ಚಿನ್ನದ ಸರ ಮತ್ತು ಎಮ್ಮೆ ಸೇರಿದಂತೆ ಹೆಚ್ಚುವರಿ ವರದಕ್ಷಿಣೆಗಾಗಿ ನಿರಂತರ ಬೇಡಿಕೆ ಇಟ್ಟು, ಗುಡಿಯಾಳ ಮೇಲೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ.
